Monday, March 29, 2010

ನಿನ್ನ ಹೆಸರು..


ನಗುವ
ತಾವರೆಯನು ಹಿಡಿದು
ಚಂದಿರನೇ ನಾಚುವಂತೆ
ನಸುನಗುತಾ, ನಲಿಯುತಾ;
ನಿನ್ನ ಉಗುರಿನಿಂದ
ಅದೇ ತಾವರೆಯ
ಎಲೆ ಮೇಲೆ ಬರೆದಿದ್ದೆ,
ನೀ ನಿನ್ನ ಹೆಸರು


ಆಗ ಗೊತ್ತಾಯ್ತು
ಚೆಲುವೆ ನನಗೆ,
ತಾರೆಗಳ ನಡುವೆ ನಲಿವ
ಚಂದಿರನ ಕಾಂತಿಗಿಂತಲೂ
ಚೆಂದ ನಿನ್ನ ಹೆಸರು.


ಆ ತಾರೆಗಳ
ಜೋಡಿಸಿ, ಅದೇ
ನೀಲಾಕಾಶದಲ್ಲಿ ಮಿಂಚಾಗಿ
ನೋಡಬೇಕೆನಿಸಿತ್ತು ಕಣೇ
ನಿನ್ನ ಹೆಸರು.


ನಸುಕಿನಲಿ
ಮೂಡಿದ ಕಿರಣಗಳ
ಕಂಡು ಅರಳುವ ಸುಮಗಳ
ಪರಿಮಳದಲ್ಲಿ ಹಿಡಿದಿಡಬೇಕು
ಎನಿಸುತಿದೆ ನಿನ್ನ ಹೆಸರು.


ನಿನ್ನ ನಗುಮೊಗದ
ನೆನಪನ್ನೆ ಮತ್ತೆಮತ್ತೆ,
ತೆರೆತೆರೆಯಾಗಿ ಮೂಡಿಸುತ್ತಿದ್ದ,
ಸಮುದ್ರದ ಅಲೆಗಳಲ್ಲಿ
ಬಚ್ಚಿಡಬೇಕೆನಿಸುತಿದೆ ನಿನ್ನ ಹೆಸರು


ನನ್ನ ಹೃದಯದ
ರಕ್ತದ ಕಣಕಣದಲ್ಲೂ
ಮಿಂಚುತಿದೆ ನಿನ್ನ ಹೆಸರು
ಕಂಡಾಗ
ನವಿಲುಗರಿ ಹಿಡಿದಿದ್ದ ನಿನ್ನ
ಪುಸ್ತಕದ ಪುಟಗಳಲ್ಲೆಲ್ಲಾ
"ನನ್ನ ಹೆಸರು".

ನನ್ನವಳ ಅಂದ


ನೀಲಿ
ಆಕಾಶದಲ್ಲಿ ಮಿನುಗುವ
ತಾರೆಗಳ ನಡುವೆ, ನಗುವ
ಚಂದಿರನಿಗಿಂತ ಚಂದ
ನನ್ನವಳ ಅಂದ.


ತೋಯ್ದ
ತಾವರೆಯ ಎಲೆಯಿಂದ
ಬೀಸಿದ ಚಾಮರದಿಂದ
ಬರುವ ತಂಗಾಳಿಯಂತೆ
ತಂಪು, ನನ್ನವಳ ಅಂದ


ಮುಂಜಾನೆಯಲಿ
ಉಷೆ ಮೂಡುವಾಗ,
ಚಿಲಿಪಿಲಿಗುಡುವ ಹಕ್ಕಿಗಳ
ಚಿಲಿಪಿಲಿಯಂತೆ ಚೆಂದ
ನನ್ನವಳ ಅಂದ


ಅದೆಷ್ಟೋ
ಕಾಲದಿಂದ ನನ್ನೆದೆಯಲಿ
ಕಾಡುತ್ತಿದ್ದ ನೋವುಗಳೆಲ್ಲವೂ
ಮಂಜಿನಂತೆ ಕರಗಿಹೋಯ್ತು
ಕಂಡಾಗ ನನ್ನವಳ ಅಂದ


ನಾ ಕಾಣೋ
ಲೋಕವೆಲ್ಲವೂ ಮರೆತು
ಹೋಯ್ತು, ಎಂದೂ ಕಾಣದ
ಸಂತಸ ಮೂಡಿತು ನನ್ನೆದೆಯಲಿ
ಕಂಡಾಗ ನನ್ನವಳ ಅಂದ


ಎಲ್ಲವನೂ ಮರೆತು
ಮುಗ್ಧ ಮಗುವಿನಂತಾದೆ,
ಆ ಸೌಂದರ್ಯದ ಆರಾಧಕನಾದೆ,
ಸದಾ ಅಪ್ಪಿ ಮುದ್ದಾಡಬೇಕೆನಿಸುತಿದೆ
ನನ್ನವಳ ಅಂದ.

Sunday, March 21, 2010

ಗೆಳೆಯನೇ ನಿನಗೋಸ್ಕರ


ಹೇಗಿರುವೆ ಗೆಳೆಯಾ,
ಇಲ್ಲಿಯವರೆಗೆ ನಾ
ನಿನ್ನ ನೋಡದೇ ಇದ್ದರೂ,
ನೀನಾದೆ ಈ ಮನಕೆ ಇನಿಯಾ..!

ನೀ ನನಗೆ
ಕಾಣದಷ್ಟು ದೂರವಿದ್ದರೂ,
ನಿನ್ನ ಪ್ರೀತಿ ಮಾತುಗಳೇ
ನನಗೆ ಹುಚ್ಚು ಹಿಡಿಸಿದ್ದು.

ಮುಂಜಾನೆಯಲಿ
ಮಂಜಿನ ಹನಿಯಾಗಿ,
ಬೆಳದಿಂಗಳಲಿ
ತಂಪು ತಂಗಾಳಿಯಾಗಿ,
ನನ್ನ ಅಪ್ಪುವೆ ಬಿಗಿಯಾಗಿ,
ನೀ ಹೀಗೇಕೆ ಕಾಡುವೆ
ದೂರದಲ್ಲಿದ್ದುಕೊಂಡೆ...!

ನಿನ್ನನು
ಯಾವಾಗ ನೋಡುವೆ
ಎನ್ನೋ ಕಾತರ ಹೆಚ್ಚಾಗ್ತಿದೆ,
ಕಣೋ ಪ್ರತಿದಿನ,
ನಿನ್ನ ಲವ್ಲಿ ಮೆಸೇಜ್ ನೋಡುವಾಗ
ಪ್ರೀತಿ ಮಾತು ಕೇಳುವಾಗ.


ನಿನ್ನೆ
ರಾತ್ರಿ ಹುಣ್ಣಿಮೆಯ
ಚಂದಿರನಿಗೊಂದು ಮುತ್ತು
ಕೊಟ್ಟಿದ್ದೆ ಕಣೋ,
ಅವನು ಮರೆಯದೇ
ನಿನಗೆ ಕೊಡಲೆಂದು.

ನೀ ಎಲ್ಲಿಯೇ
ಇದ್ದರೂ, ನಾನೋಡಿ ಬಂದು,
ನಿನ್ನ ಬಿಗಿದಪ್ಪಿ ಹಿಡಿದು,
ಒಂದೇ ಉಸಿರಲಿ
ಹೇಳಬೇಕೆನಿಸುತಿದೆ
"ನಾ ನಿನ್ನ ಪ್ರೀತಿಸುವೆ" ಎಂದು.

Friday, March 19, 2010

ಅಂಥದ್ದೇನಿತ್ತು..?


ಅಂಥದ್ದೇನಿತ್ತು?
ಚೆಲುವೆ ನೀ
ಮರೆಯಲು ನನ್ನ.
ನಿನ್ನ ಪ್ರೀತಿಗಾಗಿ
ನಾ ಸಿದ್ದನಿದ್ದೆ,
ಕೊಡಲು ಪ್ರಾಣವನ್ನ..!


ಕುಡಿನೋಟ,
ಹೂನಗೆಯಿಂದಲೇ ನೀ
ಮೋಡಿ ಮಾಡಿದ್ದೆ ನನ್ನ.
ಹಸಿವು,
ನಿದಿರೆಯ ಮರೆಸಿ,
ತಂಗಾಳಿಯಾಗಿ ಕ್ಷಣಕ್ಷಣಕೂ
ಕಾಡಿದ್ದೆ ಕಣೇ ನೀ ನನ್ನ.


ಚೆಲುವೆ
ನಿನ್ನೊಂದಿಗೆ ಇರುವಾಗ
ಕಳೆದುಹೋದದ್ದೆ
ಗೊತ್ತಿಲ್ಲ ತಿಂಗಳುಗಳು
ನಿನ್ನ
ನೆನೆಯುವ ಕ್ಷಣಗಳು
ಎಲ್ಲವೂ ಆಗಿತ್ತು ಬೆಳದಿಂಗಳು.


ಅದೇನಿತ್ತು?
ಚೆಲುವೆ ಕೊರಗು
ನನ್ನ ಪ್ರೀತಿಯಲ್ಲಿ,
ಕೊನೆಗೂ
ಮರೆಯಾದೆ ನೀ
ಮತ್ತೊಬ್ಬನ ಜೊತೆಯಲ್ಲಿ.


ಮರೆಯಲಾಗುತ್ತಿಲ್ಲ
ನನಗೆ ಚಿನ್ನಾ ನಿನ್ನನ್ನು,
ನೀನಿಲ್ಲದೆ ನಾನಾದೆ ಏಕಾಂಗಿ.
ಎದೆಯಲ್ಲಿ
ಹುದುಗಿದ್ದ ನೋವೊಂದು
ಕೊನೆಗೂ ಹೊರಬಂತು
ಕಣ್ಣಂಚಿನ ಹನಿಯಾಗಿ..!
.

Wednesday, March 17, 2010

ನೀ ಬರುವ ಮೊದಲು...


ಹಕ್ಕಿಯ ಚಿಲಿಪಿಲಿ,
ಕೋಗಿಲೆ ಕೂಗು,
ಗಂಟೆಯ ನಾದ ಎಲ್ಲವೂ
ನೀರಸವಾಗಿತ್ತು ಕಣೇ
ನಿನ್ನ
ದನಿಯ ನಾ
ಕೇಳುವ ಮೊದಲು.


ಮುಸುಕಿದ
ಮಂಜಿನ ನಡುವಿನ
ಸೂರ್ಯೋದಯ,
ಜೇನ ಕಡಲಿನಿಂದ
ಮಿಂದು ಬಂದ
ಚಂದ್ರೋದಯ,
ಎಲ್ಲವೂ ಮರೆಯಾಗಿತ್ತು
ನಿನ್ನ ನಾ
ನೋಡುವ ಮೊದಲು

ಖಾಲಿ
ಹಾಳೆಯಂತಿದ್ದ ನನ್ನ
ಮನಸಲಿ ಎಲ್ಲವೂ
ಶೂನ್ಯವಾದಂತ್ತಿತ್ತು ಕಣೇ
ನೀ
ನನ್ನ ಮನದ
ರಾಣಿಯಾಗುವ ಮೊದಲು.


ಎಂಥದೋ
ಭಯಂಕರ ಕತ್ತಲು
ಕಾಡುತ್ತಿತ್ತು ಎದೆಯೊಳಗೆ,
ಕತ್ತಲಿಂದ ತುಂಬಿದ
ನನ್ನ ಈ ಹೃದಯಕೆ
ಬೆಳಕಾಗಿ ನೀ ಬರುವ ಮೊದಲು.

Friday, March 12, 2010

ನಗುವಿನಲೆಯಲಿ...

ಚೆಲುವೆ
ನಿನ್ನ ಮೋಹಕ ನಗುವು
ಅಲೆಅಲೆಯಾಗಿ ಕಾಡಿತ್ತು
ನಾ
ಹಿಡಿದು ಹೊರಟಾಗ
ತಿಂಗಳ ಬೆಳಕಿನ ಜಾಡು.

ನೀ ಅದು
ಹೇಗೆ ಬಂಧಿಸಿದೆನ್ನ
ನಿನ್ನ ನಗುವಿನಲೆಯಲಿ.
ಹಸಿವೆಯೂ ಇಲ್ಲ,
ನಿದಿರೆಯೂ ಬರುತ್ತಿಲ್ಲ,
ಕಾಡುತಿದೆ ನಿನ್ನ
ಮೊಗದ ಬಿಂಬ ಕಣ್ಣಲಿ.

ಸಾವಿರ
ಸದ್ದಿನ ನಡುವೆಯೂ
ಕೇಳುತಿದೆ ಗೆಳತಿ
ನಿನ್ನಂತರಂಗದ ಪಿಸುಮಾತು.
ಹಾಲ್ಬೆಳಕಲಿ
ಮಿಂದ ನಿನ್ನ ಕೆನ್ನೆಗೆ
ಕೊಡಬೇಕೆನಿಸುತಿದೆ ಸಿಹಿಮುತ್ತು.

ನಿನಗಾಗಿ ನಾ
ನೂರಾರು ವರುಷಗಳು
ಕಾಯುತ, ಮರೆಯುವೆ
ನನ್ನನ್ನೇ ನಾ
ನಿನ್ನ ನಗುವಿನಲೆಯಲಿ...!
.