Wednesday, December 23, 2009

ಕಾಡುವ ಮನಸು


ಆ ಚೆಲುವೆ
ಎದುರಾದಳು
ಕಿನ್ನರ ಲೋಕದ
ಗಂಧರ್ವ ಕನ್ಯೆಯಂತೆ
ಆ ದಿನ ಸಂಜೆಯ
"ಮುಂಗಾರು ಮಳೆ"ಯಲಿ
.
.
ನೂರೆಂಟು ಕನಸುಗಳ
ಕಂಡ ಮನಸು, ನಿದಿರೆಗೆ
ಜಾರದೇ ಇದ್ದು,
ಅವಳೊಂದಿಗೆ
ದಾರಿ ಸವೆಸುತಿದೆ
"ಮಳೆಯಲಿ ಜೊತೆಯಲಿ"
.
.
ಅವಳ ಚೆಲುವನು
ಕಂಡಾಗ,
ಅವಳ ನಗುವನು
ಕಂಡಾಗ,
ನಾ ಪ್ರೀತಿಸಬೇಕು
ಎನಿಸುತದೆ "ಮನಸಾರೆ"
.
.
ತಂಪು ತಂಗಾಳಿಗೆ
ಮೈಚಾಚಿ, ಹಚ್ಚಹಸಿರಿನ
ನಡುವೆ, ಆ ಸವಿನೆನಪನ್ನೆ
ಮೆಲ್ಲುವಾಗ ನನಗಾಯ್ತು ಅವಳ
ಮುಗುಳ್ನಗೆಯ "ಪರಿಚಯ"
.
.
ಕಡಲಂಚಲಿ
ಅವಳ ತಬ್ಬಿಕೊಂಡು,
ಕೈಹಿಡಿದು, ಮರಳಲಿ
ಚಿತ್ರ ಬಿಡಿಸುವಾಸೆ
ಕಾಡುತಿದೆ "ಹಾಗೇ ಸುಮ್ಮನೇ"
.
.
ಸದಾ ಹಂಬಲಿಸುತಿದೆ
ಮನಸು, ಅವಳ
ಬಳಿ ಇರುವಾಗ
"ಮಳೆಯೂ ಬರಲಿ,
ಮಂಜೂ ಇರಲಿ" ಎಂದು.
.
.

Saturday, December 5, 2009

ಕಾದಿರುವೆ ನಿನಗಾಗಿ

ನಸುಕಿನಲಿ
ಆ ಬಾನು ಕೆಂಪೇರಿದಂತೆ,
ಕೆಂಪೇರುವುದು
ನಿನ್ನ ಕೆನ್ನೆ,
ನಾ ಕೊಡುವ
ಸಿಹಿಮುತ್ತುಗಳ ನೆನೆದು


ಆಗಾಗ ನಾನು
ನಸುನಗುತಲಿರುವೆ,
ಅರೆಹುಚ್ಚನಂತೆ,
ನಿನ್ನ ಕುಡಿನೋಟ,
ತುಂಟ ನಗೆಯನು
ಮತ್ತೆ ಮತ್ತೆ ನೆನೆದು,


ಆಗಸವನ್ನೇ
ತಬ್ಬುವ ಆಸೆಯಿಂದ
ನಾ ಕೈಚಾಚಿದಂತೆ,
ನನ್ನ ಕಣ್ಗಳು
ಕಾತರಿಸುತಿದೆ ಕಣೇ
ನಿನ್ನೊಂದಿಗಿನ
ರಸಮಯ ಕ್ಷಣಗಳಿಗಾಗಿ.

ಚೆಲುವೆ ಎಲ್ಲಿದ್ದರೂ
ಸರಿ, ಬೇಗನೇ ಬಾ,
ನಾ ಕಾದಿರುವೆ ನಿನಗಾಗಿ;
ನಾ ನಿನ್ನ ಸೇರುವೆ
ನೀ ನದಿಯಾದರೆ,
ನಾ ಕಡಲಾಗಿ.

Saturday, November 7, 2009

ಒಮ್ಮೆ ತಿರುಗಿ ನೋಡು...ನನ್ನ ಮನಸೇ
ತೋಯ್ದು ನಿಂತಿದೆ,
ನಿನ್ನನೇ ನೆನೆನೆನೆದು.
ನೀನೊಮ್ಮೆ
ನಸುನಕ್ಕುಬಿಡು ಚೆಲುವೆ,
ಮನ ನಲಿಯುವುದು
ಜಿಗಿಜಿಗಿಜಿಗಿದು


ಕ್ಷಣಕ್ಷಣಕೂ
ಕಾಡುತಿದೆ ನಿನ್ನ ನೆನಪು,
ದುಂಬಿಯನ್ನು
ಕಾಡುವ ಸುಮದಂತೆ,

ನಿನ್ನ ಮೊಗದಲಿ ನಗುವ
ಕಂಡಾಗ ನನಗನಿಸುವುದು,
ನಾ ಕಾಮನಬಿಲ್ಲನ್ನು
ತರಲು ಗಗನದಲಿ
ತೇಲಿ ಹೋದಂತೆ,


ಮಲೆನಾಡ ಹಸಿರ ನಡುವೆ
ತೋಯ್ದು ಕಂಪ ಸೂಸುವ
ಮಣ್ಣಿನ ನೆಲದಲ್ಲಿ,
ನೀ ನಡೆದಾಗ
ಮೂಡಿದ ಹೆಜ್ಜೆಗಳಂತೆ...
ಅಚ್ಚಳಿಯದಿದೆ
ಗೆಳತಿ ನಿನ್ನ ರೂಪ
ನನ್ನ ಎದೆಯೊಳಗೆ..!


ಒಮ್ಮೆ ತಿರುಗಿ ನೋಡು,
ಆ ನಿನ್ನ ಕಣ್ಣು, ಕೆನ್ನೆ, ನಗು
ನನ್ನನು ಸದಾ ಕಾಡುತಿದೆ
ಒಮ್ಮೆಯಾದರೂ
"I Love You" ಅಂತಾ
ಹೇಳಿಬಿಡು ಚೆಲುವೆ,
ನಾ ಬಚ್ಚಿಡುವೆ
ನನ್ನೆದೆ ಚಿಪ್ಪಿನಲಿ..

Friday, October 30, 2009

ತಂಗಾಳಿ ಹಾಗೂ ಬೆಳದಿಂಗಳುಅದೇಕೋ ಗೊತ್ತಿಲ್ಲ
ನನಗೆ ಆಗಾಗ ತುಂಬಾ
ಕಾಡುವುದು ಈ
"ಇರುಳ ತಂಗಾಳಿ ಹಾಗೂ
ಬೆಳದಿಂಗಳು"

ಸೊಯ್ಯಸೊಯ್ಯನೆ ಬೀಸುವ
ತಂಗಾಳಿಯಿಂದಾಗಿ,
ನನ್ನವಳ ಮುಂಗುರುಳು
ನನ್ನ ಮೋರೆಗೆ
ತಾಗಿದಂತಾಗುತದೆ.

ಹಾಲ್ಬೆಳಕನು,
ಚೆಲ್ಲಿದ ಚಂದ್ರಮನ ಕಂಡಾಗ,
ಅವಳ ಎದೆಯಲ್ಲಿಯೇ
ಅರಳುವ ಕನಸುಗಳು
ಕಾಣಿಸುತ್ತವೆ.

ಕಡಲಂಚಲಿ ನಡೆದಾಡುವಾಗ
ಆ ಅಲೆಗಳ ನಾದವು,
ನನ್ನವಳ ಕಾಲ್ಗೆಜ್ಜೆಯ
ಸದ್ದನು ನೆನಪಿಸುತ್ತದೆ.

ಅದಕ್ಕೆ ಇರಬೇಕು..!
ನನಗೆ ತುಂಬಾ
ಕಾಡುವುದು ಈ
"ತಂಗಾಳಿ ಹಾಗೂ
ಬೆಳದಿಂಗಳು."

Thursday, October 15, 2009

ನಿನ್ನ ನೆನಪು....!

ಹೇ ಚೆಲುವೇ..,
ನೀ ನನ್ನೆದುರಲ್ಲೇ ಇದ್ದರೂ,
ಇಲ್ಲದೇ ಇದ್ದರೂ. . . .

ಬೀಸುವ ತಂಗಾಳಿಯಂತೆ,
ಹೊಳೆವ ತಿಂಗಳ ಬೆಳಕಂತೆ,
ನಸುಕಿನಲಿ ಮುಸುಕಿದ ಮಂಜಿನಂತೆ,

ಸದಾ ಕಾಡುವುದು
ಗೆಳತಿ
ನಿನ್ನ ನೆನಪು . . . !
.

Wednesday, September 16, 2009

ನನ್ನ ನೆನಪು


ದಾರಿ ಕಾಣದೇ ನೀ,
ಕಡುಗತ್ತಲಲ್ಲಿ ಕಂಗೆಟ್ಟಾಗ

ಕನಸುಗಳ
ಸಾಕ್ಷಾತ್ಕಾರಕ್ಕಾಗಿ ಮನ
ತೊಳಲಾಡುವಾಗ

ಕೋಲ್ಮಿಂಚಂತೆ
ಮೂಡಲಿ ಗೆಳತಿ,
ನನ್ನ ನೆನಪು

ಕಣ್ಣಂಚಿನ
ಕಾಲುವೆಯಾಗದಿರಲಿ
ಈ ಗೆಳೆಯನ ನೆನಪು

Saturday, February 14, 2009

ಪ್ರೇಮದ ಕಾಣಿಕೆ

ಯಾವ ಕಾಣಿಕೆ ನೀಡಲಿ...
ಚೆಲುವೆ ನಿನಗೆ,
ಪ್ರೇಮಿಗಳ ದಿನ ಇಂದು,
ಗೊತ್ತು ಕಣೇ, ನಿನ್ನಲಿ
ನಾ ಕಾಣುವ ಸಂತಸ
ನನಗಾಗಿಯೇ ಎಂದು..!
.
.
ನಿನ್ನ ಕುಡಿನೋಟ ಕಂಡಾಗ
ನನ್ನಲಿ ಏನೋ ಒಂಥರಾ..!
.
.
ನಿನ್ನ ತುಂಟ ತುಟಿಗಳ
ಕಂಡಾಗ, ನನ್ನಲಿ
ಏನೋ ಒಂಥರಾ ಮಿಂಚು
ಹರಿದಂತಾಗುತಿದೆ.
.
.
ನಿನ್ನೆ ಕೆನ್ನೆಯ ಮೇಲಿನ
ಮುಂಗುರುಳು ನಾನಾಗಬಾರದೇ?
ಆ ನಿನ್ನ ಕನ್ನೆಗೆ ಮುತ್ತಿಕ್ಕಲು,
ಕಪ್ಪನೆ ಕಾಡಿಗೆ ನಾನಾಗಬಾರದೇ?
ನಿನ್ನ ಕಣ್ಣಂಚಿನ ಹೊಳಪಾಗಲು,
.
.
ಬಾಚಿ ತಬ್ಬುವಾಸೆ ಎನಗೆ
ನಸುನಗುತಾ ನೀನಿರಲು.
ಮುತ್ತನ್ನಿಕ್ಕುವ ಆಸೆಯು ನನಗೆ
ನಿನ್ನ ಕೆಂಪೇರಿದ ಕೆನ್ನೆಯ ಕಾಣಲು
.

ಗೆಳತಿ


ಹೇಗೆ ಬಣ್ಣಿಸಲಿ... ಗೆಳತಿ
ನನ್ನೆದೆಯ ಪ್ರೀತಿ...!
ಹೇಗೆ ವರ್ಣಿಸಲಿ.. ನಾ
ನೀ ನಗುವ ರೀತಿ.


ಕಣ್ಣೆವೆಯ ಅಂಚಲಿ
ನೀನಿರುವಾಗ.. ಮುಚ್ಚಿದರೂ
ನಾ.. ರೆಪ್ಪೆಯನು..
ಕಾಣುವೆ, ಕಾಡುವೆ ಗೆಳತಿ ನೀ...


ಮನ ಮೋಹಗೊಳ್ಳುವುದು
ಕಂಡಾಗ
ನಿನ್ನ ತುಟಿಯಂಚಿನ ನಗು
ನಿನ್ನ ಮೊಗದ ಅಂದವ
ಕಂಡಾಗ
ನಾನಾಗಬೇಕೆನಿಸುವುದು
ನಿನ್ನ ಮಡಿಲ ಮಗು...!


ಸೂರ್ಯಚಂದ್ರರ ಸಾಕ್ಷಿ
ನೀನಿಲ್ಲದೇ ನಾನಿರಲಾರೆ..
ನೀರಲ್ಲಿಲ್ಲದ ಮೀನಿನಂತೆ,
ನದಿಯಿಲ್ಲದ ಕಡಲಿನಂತೆ,

ಹೃದಯವೇ... ನೀನಾಗಿರುವಾಗ
ನಾ ಏಕೆ ಚಿಂತಿಸಲಿ..
ನನ್ನೆದುರು ನೀನಿರುವಾಗ
ನಾ ಏಕೆ ಕನಸ ಕಾಣಲಿ

Saturday, January 10, 2009

ಒಲವ ಚಿತ್ತಾರ

ನನ್ನೆದೆಯ ಮಿಡಿತದಲಿ,
ನಿನ್ನ ಕೈಬಳೆಯ ಸದ್ದಡಗಿದೆ.
ನನ್ನ ಕಣ್ಣರೆಪ್ಪೆಯಲಿ,
ನಿನ್ನ ಮೊಗದ ಬಿಂಬ ಮೂಡಿದೆ.

ವರ್ಷದಲಿ ತೋಯ್ದ ಹಸಿರಿನಂತೆ,
ಉಷಾಕಾಲದ ಮುಗಿಲ ರಂಗಿನಂತೆ,
ರವಿ ಮೂಡುವ ಹೊತ್ತಿನಲಿ
ಮೊಳಗುವ ಹಕ್ಕಿಯ ಚಿಲಿಪಿಲಿಯಂತೆ

ಝೇಂಕರಿಸುತಿದೆ ಗೆಳತಿ
ನೀ ನನ್ನೆದೆಯಲ್ಲೇ ಇರುವ
ಒಡತಿ, ನಮ್ಮ ಒಲವಿನ ಚಿತ್ತಾರ