Saturday, June 19, 2010

ಗುಲಾಬಿ....

ಮನಸು ಚಿಟ್ಟೆಯಂತೆ
ಬಾನಿನಲ್ಲಿ ಹಾರಿ,
ಹನಿ ಪ್ರೀತಿ,
ಜೋಗ ಜಲಪಾತದಲಿ ಜಾರಿ,
.
.
ಮನಸು
ಮಾಯವಾಯ್ತು,
ಕನಸು
ಕಳೆದು ಹೋಯ್ತು
ಈ ಹೃದಯವೇ,
ನಿನ್ನದಾಯ್ತು ಚೆಲುವೆ.
.
.
ನನ್ನೆದೆ
ಅಂತರಂಗದಲ್ಲೆಲ್ಲೋ,
ಮಲಗಿದ್ದ ಹಿಡಿ ಪ್ರೀತಿಯನ್ನು.
ಬಡಿದೆಬ್ಬಿಸಿತು
ನೀ ಮುಡಿದಾ
ಮಲ್ಲಿಗೆಯ ಕಂಪು.
.
.
ಮಿಸುಕಾಡಲು
ಬಿಡದೇ ಸೆಳೆದಿತ್ತು.
ನನ್ನ ಕಣ್ಗಳ ನೋಟ
ನೀ ಮುಡಿದಾ
ಗುಲಾಬಿಯ ಕೆಂಪು.
.
.
ಆ ಗುಲಾಬಿ,
ಆ ಮಲ್ಲಿಗೆ,
ನಾನಾಗಬಾರದಿತ್ತೆ.
ಗೆಳತಿ ನಿನ್ನ
ಮುಡಿಯೇರಲು,
ನಿನ್ನ ಅಂದಕೆ
ಮೆರುಗು ತರಲು.
.
.
ಬಣ್ಣಿಸಲು
ಪದಗಳೇ ಸಿಗುತ್ತಿಲ್ಲ
ಕಂಡಾಗ ಗುಲಾಬಿಯ ಚೆಂದ,
ನನ್ನ ದೃಷ್ಟಿಯೇ
ತಾಕಬಹುದೇನೋ
ನಿನಗೆ, ನೋಡುತ್ತಾ
ನಿಂತರೇ ನಾ,
ಮೈಮರೆತು ನಿನ್ನಂದ.

Wednesday, May 26, 2010

ನನ್ನೆದೆ ಪ್ರೀತಿ.


ಮುಂಜಾನೆಯಲಿ,
ಈ ಧರೆಯ ಮೇಲೆ, ರವಿ
ಚೆಲ್ಲಿದ ಹೊಂಬಿಸಿಲು ನನ್ನ ಪ್ರೀತಿ.
ಭಯದಿಂದ ಕಂಗೆಟ್ಟ,
ಕತ್ತಲು ತುಂಬಿದ,
ನಿನ್ನ ಹೃದಯಕೆ,
ಬೆಳದಿಂಗಳು ನನ್ನೆದೆ ಪ್ರೀತಿ.

ಬಣ್ಣಬಣ್ಣದ ಹೂಗಳ,
ಕಂಪು ಸೂಸುತಾ ಮೆರೆವ,
ಹೂಬನ ನನ್ನ ಪ್ರೀತಿ.
ಈ ಭೂದೇವಿಗೆ,
ಅಂದ-ಚೆಂದವ ಹೆಚ್ಚಿಸುವ,
ವನಸಿರಿಯಂತೆ ಚೆಂದ
ಕಣೇ ನನ್ನೆದೆ ಪ್ರೀತಿ.

ಅಲ್ಲೆಲ್ಲೊ..
ಹಾರುವ ದುಂಬಿಯನು,
ಕ್ಷಣಮಾತ್ರದಲಿ ಸೆಳೆವ,
ಹೂವಿನ ಮಕರಂದದಂತೆ
ನನ್ನ ಪ್ರೀತಿ.
ಅದೆಷ್ಟೋ,
ವರುಷಗಳಿಂದ
ಹನಿಹನಿಯಾಗಿ ಕೂಡಿಟ್ಟ
ಸಿಹಿಜೇನು ಕಣೇ ನನ್ನೆದೆ ಪ್ರೀತಿ.

ನನ್ನ ಹಾಡಿಗೆ,
ನೀ ಕುಣಿವುದಾದರೆ,
ಆ ನೃತ್ಯಕೆ ಸುಮಧುರ
ಸಂಗೀತ ನನ್ನ ಪ್ರೀತಿ.
ಚೆಲುವೆ,
ನಿನ್ನ ಪ್ರೀತಿಯ ಹಾಡಿಗೆ,
ಪಲ್ಲವಿ ಕಣೇ ನನ್ನೆದೆ ಪ್ರೀತಿ.

ನಿನ್ನದೇ ಬಂಗಾರಿ,
ಇಷ್ಟು ದಿನ ನನ್ನೆದೆಯಲಿ
ಬಚ್ಚಿಟ್ಟ ಈ ಪ್ರೀತಿ.
ಎಲ್ಲಿದ್ದರೂ,
ಬೇಗ ಬಾ ಒಲವೆ,
ನಿನಗಾಗಿಯೇ ನಾ,
ಮೀಸಲಿಟ್ಟಿರುವೆ ನನ್ನೆದೆ ಪ್ರೀತಿ.

Sunday, May 16, 2010

ಸ್ವಪ್ನ ಸುಂದರಿ


ಅದೆಲ್ಲಿ ಅಡಗಿರುವೆ
ಚೆಲುವೆ, ನನ್ನೆದೆಯ
ಕನಸೆಲ್ಲವನು ಕದ್ದು, ಕಾಣದೇ
ಮಾಯವಾದ ಚಿತ್ತಚೋರಿ.
ನಿನ್ನ ತುಟಿಯಂಚಲಿ
ಮೂಡಿದ್ದ ಹುಸಿನಗೆ,
ಕೋಲ್ಮಿಂಚಿನಂಥ
ಕುಡಿನೋಟದಿಂದ ಸೆಳೆದಿದ್ದೆ.
ನೀನೆನ್ನ ಸ್ವಪ್ನಸುಂದರಿ.


ಚೈತ್ರ ಮುಂಜಾವಿನಲಿ,
ಹನಿಹನಿ ಇಬ್ಬನಿಯಿಂದ
ತೋಯ್ದ ಹಚ್ಚಹಸಿರು ನೆಲದಲಿ,
ನೀನೋಡುವಾಗ ಕೇಳಿದ್ದ
ನಿನ್ನ ಕಾಲ್ಗೆಜ್ಜೆಯ ಸದ್ದು
ನನ್ನ ಕಾಡುತಿದೆ.. ಕಣೇ....


ನಮ್ಮೂರ
ಮಾವಿನ ತೋಪಿನ,
ಹಸಿಮಣ್ಣಿನ ಕಂಪು.
ಕ್ಷಣಮಾತ್ರದಲಿ ಸೆಳೆದಿತ್ತು,
ರಂಬೆ-ಮೇನಕೆಯರನು
ಮೀರುವ ನಿನ್ನ ರೂಪು,
ಹಗಲು-ಇರುಳೆನ್ನದೇ
ಪದೇಪದೇ ಕಾಡುವುದು
ನಿನ್ನ ನೆನಪು


ತಿಂಗಳ
ಬೆಳದಿಂಗಳಿನಲಿ,
ತಣ್ಣಗೆ ತೀಡುವ ತಂಗಾಳಿಯಲಿ,
ನನ್ನನು ನಾ
ಮರೆಯುವೆ, ನೀನಿದ್ದಾಗ
ನನ್ನ ತೋಳಬಂಧನದಲಿ,
ಅದು ಹೇಗೋ ಗೊತ್ತಿಲ್ಲ ಕಣೇ,
ನಿನ್ನ ಪ್ರೀತಿ ಸದಾ
ನನ್ನದಾಗಿ ಇರಬೇಕು ಎಂಬ
ಸ್ವಾರ್ಥ ಮೂಡುತಿದೆ ನನ್ನಲಿ.

Thursday, April 22, 2010

ಪ್ರೀತಿಯ Feeling


ನನ್ನ ಪ್ರೀತಿಯ ಸಖಿ
ನನ್ನನು ಕಂಡಾಗ,
ಮೂಡುತ್ತದೆ ಅಲ್ಲವೇ?
ನಿನ್ನ ಮೊಗದಲ್ಲಿ smile

ಅದೇಕೋ
ಗೊತ್ತಿಲ್ಲ ಕಣೇ,
ನನಗೆ ಹುಚ್ಚು ಹಿಡಿಯುತ್ತದೆ,
ಕಂಡಾಗ ನೀ ನಗುವ style


ಬಹಳ ಅಂದವಾಗಿ
ಕಾಣುತ್ತೀ ಕಣೇ,
ನೀನಿದ್ದರೂ
ತುಂಬಾ simple,


ತುಟಿ ಕಚ್ಚಬೇಕು
ಎನಿಸುತದೆ,
ಕಂಡಾಗ ನಿನ್ನ್ನ
ಕೆನ್ನೆ ಮೇಲೆ dimple,


ನಿನ್ನ ಕಿಲಕಿಲ
ನಗುವೇ, ನನ್ನೆದೆಯ
ಹಾಡಿಗೆ music,

ನೀ ಹೀಗೆ
ಎಂದಿಗೂ
ನಗುನಗುತಲಿದ್ದರೆ,
ನಾ ಬರೆಯುವೆ
ಸಾವಿರ lyric

ನನ್ನ ಮನದ
ದುಗುಡವನ್ನೆಲ್ಲಾ
ಮರೆಸಿ, ನೋವೆಲ್ಲವನು
ದೂರ ಮಾಡಿದೆ, ನೀ
ಬಳಸಿ ಪ್ರೀತಿಯ healing,

ನಾನೆಲ್ಲಿದ್ದರೂ,
ಕಣ್ಮುಚ್ಚಿ ಕುಳಿತರೂ,
ನಿದಿರೆಯಲ್ಲೂ ಕಾಡುತ್ತೆ ಚೆಲುವೆ,
ನಿನ್ನ ಪ್ರೀತಿಯ feeling...!

Wednesday, April 7, 2010

ನನ್ನ ಇನಿಯನ ಪ್ರೀತಿ


ಇನಿಯಾ
ನಿನಗಾಗಿ ಕಂಡಿದ್ದೆ,
ನಾ ನನ್ನ ಕಣ್ಣಂಚಿನಲಿ
ನೂರೊಂದು ಸಿಹಿಕನಸುಗಳು.
ಅವುಗಳು
ಪ್ರತಿಕ್ಷಣಕೂ ನನ್ನ
ಕೆನ್ನೆಕೆಂಪನು ಇನ್ನೂ
ಹೆಚ್ಚಿಸಲು ಕಾಡುವ ನೆನಪುಗಳು.


ಯಾವ
ಜನುಮದ ಪುಣ್ಯವೋ,
ಏನೋ, ನಾ ಕಾಣೆ
ನಿನ್ನ ಪ್ರೀತಿಯ ನಾ ಪಡೆಯಲು.
ಭಾವುಕಳಾದೆ
ನಾನು, ಕಣ್ಣಂಚಿನಲಿ
ಹನಿಗಳು ತುಂಬಿಕೊಂಡೆ,
ಕಂಡಾಗ ನಿನ್ನ ಪ್ರೀತಿಯ ಹೊನಲು.


ಜಗವನ್ನೆಲ್ಲಾ
ಮರೆತು, ನನ್ನೆಲ್ಲಾ
ನೋವುಗಳ ಮರೆತು
ಪ್ರತಿಕ್ಷಣವನೂ ಮೀಸಲಿಡುವೆ ನಿನಗಾಗಿ
ತಿಳಿಮುಗಿಲಿನಂತೆ,
ಹರಿವ ನದಿಯಂತೆ,
ಮಕರಂದಕ್ಕಿಂತಲೂ ಚೆಂದ
ನೀ ತೋರುವ ಪ್ರೀತಿ... ನನಗಾಗಿ.

ಹೃದಯದ ಕೋರಿಕೆ


ಯಾವ
ರೀತಿ ಮರೆತೆ,
ಚೆಲುವೆ ನೀನು ನನ್ನ...?
ನಾನು
ನನ್ನ ಪ್ರಾಣಕ್ಕಿಂತ
ಹೆಚ್ಚು ಪ್ರೀತಿಸುತ್ತಿದ್ದೆ ನಿನ್ನ..!


ನೀ ಬಿಟ್ಟು
ಹೋದ ಕ್ಷಣಗಳ
ಕಹಿನೆನಪು, ಬೇಡವೆಂದರೂ
ಹೃದಯವನು ಕೊರೆಯುತ್ತಿತ್ತು.,
ಕಡಲಂಚಿನ
ಬಂಡೆಗಳಿಗೆ ಬಂದು
ಅಪ್ಪಳಿಸುವ ಕಡಲ ಅಲೆಯಂತೆ..!

ಅದೆಷ್ಟೂ
ತಡೆದರೂ ನಾ,
ಉಕ್ಕಿ ಬರುತ್ತಿತ್ತು. ನನ್ನ
ಕಣ್ಣಂಚಿನ ಅಶ್ರುಧಾರೆ,
ತನ್ನನು ತಾನೇ
ಸುಡುತ್ತಾ ಅಳುವ ಮೇಣದಂತೆ.

ನನ್ನ ಹೃದಯ
ಬೆಂದರೂ ಸರಿ,
ಚೂರಾದರೂ ಸರಿ...
ಬಿಟ್ಟು ಬಿಡು ಚೆಲುವೆ,
ನನ್ನ ಎದೆಯ ಗೊಡವೆ.

ನಿನಗೆ
ಯಾವ ಕ್ಷಣಕೂ
ಕಹಿನೆನಪು ಕಾಡದಿರಲಿ,
ನಿನ್ನ ಹೃದಯ ನೋವಾಗದಿರಲಿ,
ಎಂಬುದೊಂದೇ ಈ
ನನ್ನ ಹೃದಯದ ಕೋರಿಕೆ

Monday, March 29, 2010

ನಿನ್ನ ಹೆಸರು..


ನಗುವ
ತಾವರೆಯನು ಹಿಡಿದು
ಚಂದಿರನೇ ನಾಚುವಂತೆ
ನಸುನಗುತಾ, ನಲಿಯುತಾ;
ನಿನ್ನ ಉಗುರಿನಿಂದ
ಅದೇ ತಾವರೆಯ
ಎಲೆ ಮೇಲೆ ಬರೆದಿದ್ದೆ,
ನೀ ನಿನ್ನ ಹೆಸರು


ಆಗ ಗೊತ್ತಾಯ್ತು
ಚೆಲುವೆ ನನಗೆ,
ತಾರೆಗಳ ನಡುವೆ ನಲಿವ
ಚಂದಿರನ ಕಾಂತಿಗಿಂತಲೂ
ಚೆಂದ ನಿನ್ನ ಹೆಸರು.


ಆ ತಾರೆಗಳ
ಜೋಡಿಸಿ, ಅದೇ
ನೀಲಾಕಾಶದಲ್ಲಿ ಮಿಂಚಾಗಿ
ನೋಡಬೇಕೆನಿಸಿತ್ತು ಕಣೇ
ನಿನ್ನ ಹೆಸರು.


ನಸುಕಿನಲಿ
ಮೂಡಿದ ಕಿರಣಗಳ
ಕಂಡು ಅರಳುವ ಸುಮಗಳ
ಪರಿಮಳದಲ್ಲಿ ಹಿಡಿದಿಡಬೇಕು
ಎನಿಸುತಿದೆ ನಿನ್ನ ಹೆಸರು.


ನಿನ್ನ ನಗುಮೊಗದ
ನೆನಪನ್ನೆ ಮತ್ತೆಮತ್ತೆ,
ತೆರೆತೆರೆಯಾಗಿ ಮೂಡಿಸುತ್ತಿದ್ದ,
ಸಮುದ್ರದ ಅಲೆಗಳಲ್ಲಿ
ಬಚ್ಚಿಡಬೇಕೆನಿಸುತಿದೆ ನಿನ್ನ ಹೆಸರು


ನನ್ನ ಹೃದಯದ
ರಕ್ತದ ಕಣಕಣದಲ್ಲೂ
ಮಿಂಚುತಿದೆ ನಿನ್ನ ಹೆಸರು
ಕಂಡಾಗ
ನವಿಲುಗರಿ ಹಿಡಿದಿದ್ದ ನಿನ್ನ
ಪುಸ್ತಕದ ಪುಟಗಳಲ್ಲೆಲ್ಲಾ
"ನನ್ನ ಹೆಸರು".

ನನ್ನವಳ ಅಂದ


ನೀಲಿ
ಆಕಾಶದಲ್ಲಿ ಮಿನುಗುವ
ತಾರೆಗಳ ನಡುವೆ, ನಗುವ
ಚಂದಿರನಿಗಿಂತ ಚಂದ
ನನ್ನವಳ ಅಂದ.


ತೋಯ್ದ
ತಾವರೆಯ ಎಲೆಯಿಂದ
ಬೀಸಿದ ಚಾಮರದಿಂದ
ಬರುವ ತಂಗಾಳಿಯಂತೆ
ತಂಪು, ನನ್ನವಳ ಅಂದ


ಮುಂಜಾನೆಯಲಿ
ಉಷೆ ಮೂಡುವಾಗ,
ಚಿಲಿಪಿಲಿಗುಡುವ ಹಕ್ಕಿಗಳ
ಚಿಲಿಪಿಲಿಯಂತೆ ಚೆಂದ
ನನ್ನವಳ ಅಂದ


ಅದೆಷ್ಟೋ
ಕಾಲದಿಂದ ನನ್ನೆದೆಯಲಿ
ಕಾಡುತ್ತಿದ್ದ ನೋವುಗಳೆಲ್ಲವೂ
ಮಂಜಿನಂತೆ ಕರಗಿಹೋಯ್ತು
ಕಂಡಾಗ ನನ್ನವಳ ಅಂದ


ನಾ ಕಾಣೋ
ಲೋಕವೆಲ್ಲವೂ ಮರೆತು
ಹೋಯ್ತು, ಎಂದೂ ಕಾಣದ
ಸಂತಸ ಮೂಡಿತು ನನ್ನೆದೆಯಲಿ
ಕಂಡಾಗ ನನ್ನವಳ ಅಂದ


ಎಲ್ಲವನೂ ಮರೆತು
ಮುಗ್ಧ ಮಗುವಿನಂತಾದೆ,
ಆ ಸೌಂದರ್ಯದ ಆರಾಧಕನಾದೆ,
ಸದಾ ಅಪ್ಪಿ ಮುದ್ದಾಡಬೇಕೆನಿಸುತಿದೆ
ನನ್ನವಳ ಅಂದ.

Sunday, March 21, 2010

ಗೆಳೆಯನೇ ನಿನಗೋಸ್ಕರ


ಹೇಗಿರುವೆ ಗೆಳೆಯಾ,
ಇಲ್ಲಿಯವರೆಗೆ ನಾ
ನಿನ್ನ ನೋಡದೇ ಇದ್ದರೂ,
ನೀನಾದೆ ಈ ಮನಕೆ ಇನಿಯಾ..!

ನೀ ನನಗೆ
ಕಾಣದಷ್ಟು ದೂರವಿದ್ದರೂ,
ನಿನ್ನ ಪ್ರೀತಿ ಮಾತುಗಳೇ
ನನಗೆ ಹುಚ್ಚು ಹಿಡಿಸಿದ್ದು.

ಮುಂಜಾನೆಯಲಿ
ಮಂಜಿನ ಹನಿಯಾಗಿ,
ಬೆಳದಿಂಗಳಲಿ
ತಂಪು ತಂಗಾಳಿಯಾಗಿ,
ನನ್ನ ಅಪ್ಪುವೆ ಬಿಗಿಯಾಗಿ,
ನೀ ಹೀಗೇಕೆ ಕಾಡುವೆ
ದೂರದಲ್ಲಿದ್ದುಕೊಂಡೆ...!

ನಿನ್ನನು
ಯಾವಾಗ ನೋಡುವೆ
ಎನ್ನೋ ಕಾತರ ಹೆಚ್ಚಾಗ್ತಿದೆ,
ಕಣೋ ಪ್ರತಿದಿನ,
ನಿನ್ನ ಲವ್ಲಿ ಮೆಸೇಜ್ ನೋಡುವಾಗ
ಪ್ರೀತಿ ಮಾತು ಕೇಳುವಾಗ.


ನಿನ್ನೆ
ರಾತ್ರಿ ಹುಣ್ಣಿಮೆಯ
ಚಂದಿರನಿಗೊಂದು ಮುತ್ತು
ಕೊಟ್ಟಿದ್ದೆ ಕಣೋ,
ಅವನು ಮರೆಯದೇ
ನಿನಗೆ ಕೊಡಲೆಂದು.

ನೀ ಎಲ್ಲಿಯೇ
ಇದ್ದರೂ, ನಾನೋಡಿ ಬಂದು,
ನಿನ್ನ ಬಿಗಿದಪ್ಪಿ ಹಿಡಿದು,
ಒಂದೇ ಉಸಿರಲಿ
ಹೇಳಬೇಕೆನಿಸುತಿದೆ
"ನಾ ನಿನ್ನ ಪ್ರೀತಿಸುವೆ" ಎಂದು.

Friday, March 19, 2010

ಅಂಥದ್ದೇನಿತ್ತು..?


ಅಂಥದ್ದೇನಿತ್ತು?
ಚೆಲುವೆ ನೀ
ಮರೆಯಲು ನನ್ನ.
ನಿನ್ನ ಪ್ರೀತಿಗಾಗಿ
ನಾ ಸಿದ್ದನಿದ್ದೆ,
ಕೊಡಲು ಪ್ರಾಣವನ್ನ..!


ಕುಡಿನೋಟ,
ಹೂನಗೆಯಿಂದಲೇ ನೀ
ಮೋಡಿ ಮಾಡಿದ್ದೆ ನನ್ನ.
ಹಸಿವು,
ನಿದಿರೆಯ ಮರೆಸಿ,
ತಂಗಾಳಿಯಾಗಿ ಕ್ಷಣಕ್ಷಣಕೂ
ಕಾಡಿದ್ದೆ ಕಣೇ ನೀ ನನ್ನ.


ಚೆಲುವೆ
ನಿನ್ನೊಂದಿಗೆ ಇರುವಾಗ
ಕಳೆದುಹೋದದ್ದೆ
ಗೊತ್ತಿಲ್ಲ ತಿಂಗಳುಗಳು
ನಿನ್ನ
ನೆನೆಯುವ ಕ್ಷಣಗಳು
ಎಲ್ಲವೂ ಆಗಿತ್ತು ಬೆಳದಿಂಗಳು.


ಅದೇನಿತ್ತು?
ಚೆಲುವೆ ಕೊರಗು
ನನ್ನ ಪ್ರೀತಿಯಲ್ಲಿ,
ಕೊನೆಗೂ
ಮರೆಯಾದೆ ನೀ
ಮತ್ತೊಬ್ಬನ ಜೊತೆಯಲ್ಲಿ.


ಮರೆಯಲಾಗುತ್ತಿಲ್ಲ
ನನಗೆ ಚಿನ್ನಾ ನಿನ್ನನ್ನು,
ನೀನಿಲ್ಲದೆ ನಾನಾದೆ ಏಕಾಂಗಿ.
ಎದೆಯಲ್ಲಿ
ಹುದುಗಿದ್ದ ನೋವೊಂದು
ಕೊನೆಗೂ ಹೊರಬಂತು
ಕಣ್ಣಂಚಿನ ಹನಿಯಾಗಿ..!
.

Wednesday, March 17, 2010

ನೀ ಬರುವ ಮೊದಲು...


ಹಕ್ಕಿಯ ಚಿಲಿಪಿಲಿ,
ಕೋಗಿಲೆ ಕೂಗು,
ಗಂಟೆಯ ನಾದ ಎಲ್ಲವೂ
ನೀರಸವಾಗಿತ್ತು ಕಣೇ
ನಿನ್ನ
ದನಿಯ ನಾ
ಕೇಳುವ ಮೊದಲು.


ಮುಸುಕಿದ
ಮಂಜಿನ ನಡುವಿನ
ಸೂರ್ಯೋದಯ,
ಜೇನ ಕಡಲಿನಿಂದ
ಮಿಂದು ಬಂದ
ಚಂದ್ರೋದಯ,
ಎಲ್ಲವೂ ಮರೆಯಾಗಿತ್ತು
ನಿನ್ನ ನಾ
ನೋಡುವ ಮೊದಲು

ಖಾಲಿ
ಹಾಳೆಯಂತಿದ್ದ ನನ್ನ
ಮನಸಲಿ ಎಲ್ಲವೂ
ಶೂನ್ಯವಾದಂತ್ತಿತ್ತು ಕಣೇ
ನೀ
ನನ್ನ ಮನದ
ರಾಣಿಯಾಗುವ ಮೊದಲು.


ಎಂಥದೋ
ಭಯಂಕರ ಕತ್ತಲು
ಕಾಡುತ್ತಿತ್ತು ಎದೆಯೊಳಗೆ,
ಕತ್ತಲಿಂದ ತುಂಬಿದ
ನನ್ನ ಈ ಹೃದಯಕೆ
ಬೆಳಕಾಗಿ ನೀ ಬರುವ ಮೊದಲು.

Friday, March 12, 2010

ನಗುವಿನಲೆಯಲಿ...

ಚೆಲುವೆ
ನಿನ್ನ ಮೋಹಕ ನಗುವು
ಅಲೆಅಲೆಯಾಗಿ ಕಾಡಿತ್ತು
ನಾ
ಹಿಡಿದು ಹೊರಟಾಗ
ತಿಂಗಳ ಬೆಳಕಿನ ಜಾಡು.

ನೀ ಅದು
ಹೇಗೆ ಬಂಧಿಸಿದೆನ್ನ
ನಿನ್ನ ನಗುವಿನಲೆಯಲಿ.
ಹಸಿವೆಯೂ ಇಲ್ಲ,
ನಿದಿರೆಯೂ ಬರುತ್ತಿಲ್ಲ,
ಕಾಡುತಿದೆ ನಿನ್ನ
ಮೊಗದ ಬಿಂಬ ಕಣ್ಣಲಿ.

ಸಾವಿರ
ಸದ್ದಿನ ನಡುವೆಯೂ
ಕೇಳುತಿದೆ ಗೆಳತಿ
ನಿನ್ನಂತರಂಗದ ಪಿಸುಮಾತು.
ಹಾಲ್ಬೆಳಕಲಿ
ಮಿಂದ ನಿನ್ನ ಕೆನ್ನೆಗೆ
ಕೊಡಬೇಕೆನಿಸುತಿದೆ ಸಿಹಿಮುತ್ತು.

ನಿನಗಾಗಿ ನಾ
ನೂರಾರು ವರುಷಗಳು
ಕಾಯುತ, ಮರೆಯುವೆ
ನನ್ನನ್ನೇ ನಾ
ನಿನ್ನ ನಗುವಿನಲೆಯಲಿ...!
.

Monday, February 22, 2010

ಮಧುಚಂದ್ರ

ಒಂದಿರುಳ ಕನಸಿನಲಿ
ನನ್ನವಳ ಜೊತೆಯಲ್ಲಿ,
ನಾ ಹಾರಾಡುತ್ತಿದ್ದೆ
ಬಾನಂಗಳದಲ್ಲಿ

ಮಧುಚಂದ್ರಕ್ಕಾಗಿ
ಕಾದು ನಿಂತ ದೋಣಿಯ
ಹಾಗೆ ಕಾಣುತ್ತಿದ್ದ ಚಂದಿರ
ತಾರಾಮಂಡಲದ
ಜೇನ ಕಡಲಿನಲಿ

ಅವಳು ನಾನು
ಚಂದಿರನೇರಿ ಹೊರಟಾಗ
ಖುಷಿಯನ್ನು ಹೆಚ್ಚಿಸುತ್ತಿತ್ತು
ತಾರೆಗಳ ಚಪ್ಪಾಳೆ

ಸಪ್ತಸಾಗರದಾಚೆ
ನಾವು ದಾಟಿ ಹೋದಂತೆ
ಭಾಸವಾಗುತಿದೆ
ನನ್ನ ಭಾವಲಹರಿಯಲಿ

ಕಣ್ತೆರೆದು ನೋಡಿದರೆ
ನಾ ನಮ್ಮನೆ ಮಂಚದಲ್ಲಿದ್ದೆ
ನಾ ಒಂಟಿಯಾಗಿ...!
ಆದರೂ ಚೆಂದ
ಕನಸಿನಲ್ಲೂ ಕಂಡ
ಮಧುಚಂದ್ರ . . . !
ವಾಹ್ ಬಲು
ಮೋಹಕ ... ಚುಂಬಕ ...

Friday, February 5, 2010

ನಿನ್ನ ಪ್ರೀತಿಯ ಮೋಡಿ

ಹೇ
ಚಿನ್ನ ನಿನ್ನ
ಪ್ರೀತಿಯ ಮೋಡಿಗೆ,
ನಾ
ಬಿದ್ದೆ ಬಲೆಗೆ
ಸಿಲುಕಿದ ಮೀನಿನ ಹಾಗೇ.

ಸೋತು ಹೋಯ್ತು
ಚೆಲುವೆ ನನ್ನ ಮನಸು
ನಿನ್ನ ಅಂದ ಕಂಡಾಗ,

ನಾ ಕಂಡ
ಕನಸುಗಳೆಲ್ಲವೂ ಜೀವ
ತಳೆದು ನಿಂತಂತಿತ್ತು
ನಿನ್ನ ನಾ ಕಂಡಾಗ

ನೀ ನಡೆದು
ಹೊರಟಾಗ ಹುಸಿಮುನಿಸಿನಲಿ
ನಾ ತಡೆದು
ಕೊಟ್ಟಾಗ ಸಿಹಿಚುಂಬವನವ
ನಿನ್ನ ಕೈಗೆ, ಅದೆಂತಹ
ಹರ್ಷ ನಿನ್ನ ಮನದಲಿ.

ಪದೇ ಪದೇ
ನೀ ಮರೆಮಾಚುತ್ತಿದ್ದೆ,
ನಿನ್ನ ನಾಚಿಕೆ ತುಂಬಿದ ಮೋರೆ,
ದೇವಲೋಕದ
ಅಪ್ಸರೆಯಂತೆ ಕಾಣುತ್ತಿದೆ
ನೀನಾಗಿದ್ದಾಗ ಸೀರೆಯ ನೀರೆ.

ಚೆಲುವೆ
ನೀ ಹೇಗೆ ಅಡಗಿರುವೆ
ನನ್ನ ಕಣ್ಣರೆಪ್ಪೆಯಲಿ,
ಮುಚ್ಚಿದರೂ ನಾ
ರೆಪ್ಪೆಯನು ಕಾಣುವೆ
ನೀ ನನ್ನ ಕಣ್ಣಲಿ

ನೀ ಹೇಗೋ
ಕಾಣೇ, ಸದ್ದಿಲ್ಲದೇ
ಮನದಲಿ ಮನೆ ಮಾಡಿದೆ
ಚೆಲುವೆ
ಇದೇ ತಾನೇ
"ನಿನ್ನ ಪ್ರೀತಿಯ ಮೋಡಿ"